ಜಟ್ಟಿ ತಾಯಮ್ಮ
1862-1947. ಪ್ರಸಿದ್ಧ ಭರತನಾಟ್ಯ ಪ್ರವೀಣೆ, ಸಂಗೀತ ವಿದುಷಿ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಖಾಸಾ ಊಳಿಗದವರಾಗಿದ್ದ ಜಟ್ಟಿ ದಾಸಪ್ಪನವರ ಪುತ್ರಿ. ಚಿಕ್ಕವಯಸ್ಸಿನಿಂದಲೂ ಈಕೆಗೆ ಸಂಗೀತದಲ್ಲಿ ಅಭಿರುಚಿ. ತಂದೆ ಆಂಧ್ರದ ತೆಲುಗು ಜಾವಡಿ, ಮೂವ-ಗೋಪಾಲ, ಕ್ಷೇತ್ರಜ್ಞ ಪದದಲ್ಲಿ ಹೆಸರುವಾಸಿಯಾಗಿದ್ದರು. ತಂದೆ ಕಲಿಸಿದ ಪಾಠವಲ್ಲದೆ ಈಕೆಗೆ ಸುಬ್ಬರಾಯಪ್ಪನವರಿಂದ ಭರತನಾಟ್ಯ ಶಿಕ್ಷಣವೂ ಲಭಿಸಿತು.

  	ಕ್ರಮೇಣ ತಾಯಮ್ಮ ಕವೀಶ್ವರ ಗಿರಿಯಪ್ಪನವರಿಂದ ಅಭಿನಯ, ಚಂದ್ರಶೇಖರ ಶಾಸ್ತ್ರಿಗಳಿಂದ ತೆಲುಗು ಜಾವಡಿ ಮತ್ತು ಪದಗಳು, ಅಭಿನವ ಕಾಳಿದಾಸ ಆಸ್ಥಾನ ವಿದ್ವಾನ್ ಬಸವಪ್ಪಶಾಸ್ತ್ರಿಗಳಿಂದ ಕನ್ನಡ ಜಾವಡಿ ಮತ್ತು ಪದಗಳನ್ನು ಕಲಿತರು. ಅನಂತರ ತಮ್ಮ ಹದಿನೈದನೆಯ ವರ್ಷದಲ್ಲಿ ಅರಮನೆಗಳಲ್ಲಿ ಭರತನಾಟ್ಯ ಪ್ರದರ್ಶನವೊಂದನ್ನು ನೀಡಿ ವಿದ್ವಾಂಸರ ಮೆಚ್ಚುಗೆ ಪಡೆದು ರಾಜನರ್ತಕಿಯಾಗಿ ನೇಮಿಸಲ್ಪಟ್ಟರು. ಆದರೆ ಕಾರಣಾಂತರಗಳಿಂದ ಕೆಲವು ದಿನಗಳಲ್ಲಿಯೇ ಅರಮನೆಯ ವೃತ್ತಿಯಿಂದ ದೂರ ಉಳಿದರು. ಆಮೇಲೆ ಚಾಮರಾಜ ಒಡೆಯರ ಆಹ್ವಾನದ ಮೇಲೆ ವಿಶೇಷ ದಿನಗಳಲ್ಲಿ ರಾಜಸಭೆಗಳಲ್ಲಿ ನೃತ್ಯ ಮಾಡುತ್ತಿದ್ದರಷ್ಟೆ.
 
 	ನವ ವ್ಯಾಕರಣ ಪಂಡಿತ ಶೃಂಗೇರಿ ಮಠದ ಸರ್ವಾಧಿಕಾರಿಯಾಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿಯವರಿಂದ ತಾಯಮ್ಮ ಬಹುಕಾಲ ಸಂಸ್ಕøತ ಶಿಕ್ಷಣ ಪಡೆದಿದ್ದುದರಿಂದ ಅಭಿನಯಕ್ಕಾಗಿ ಅವರು ಹೆಚ್ಚಾಗಿ ಗೀತಗೋವಿಂದ, ಅಮರುಕ, ಕೃಷ್ಣಕರ್ಣಾಮೃತ ಮತ್ತು ಕಾಳಿದಾಸಾದಿಗಳ ಕೃತಿಗಳನ್ನು ಬಳಸುತ್ತಿದ್ದರು. ಅವರಲ್ಲಿ ಕನ್ನಡ, ತೆಲುಗು ಜಾವಡಿ ಮತ್ತು ಪದಗಳ ಭಂಡಾರವೇ ಇತ್ತು. ಸಂಗೀತಶಾಸ್ತ್ರ ವಿಶಾರದ ಆಸ್ಥಾನ ವಿದ್ವಾನ್ ವಾಸುದೇವಚಾರ್ಯರು ತಾಯಮ್ಮನವರಿಗೆ ರಾಗಮಾಲಿಕೆಯ ಒಂದು ವಾಮನಸ್ತೋತ್ರವನ್ನು ಅನುಗ್ರಹಿಸಿದ್ದರು. ತಾಯಮ್ಮನವರ ಕಲಾದೃಷ್ಟಿ ಪ್ರಾಂತ್ಯಭಾವನೆಗಳಿಂದ ದೂರವಾಗಿ ಬಹು ವಿಶಾಲವಾಗಿತ್ತು. ಉತ್ತರಾದಿ ಸಂಗೀತವನ್ನೂ ಶ್ರೇಷ್ಠ ಕಲಾವಿದರಿಂದ ಅಭ್ಯಾಸಮಾಡಿ ಠುಮರಿ, ಗಜûಲ್ ಇತ್ಯಾದಿಗಳಿಗೆ ಮನಮೋಹಕವಾಗಿ ಅಭಿನಯ ನೀಡುತ್ತಿದ್ದುದು ಇದಕ್ಕೆ ಸಾಕ್ಷಿಯಾಗಿದೆ.
 
 	ಸುಮಾರು 1935ರಲ್ಲಿ ರಾಗಿಣಿದೇವಿ, ಮಿಸಿ ಮೇಯೊ ಮತ್ತು ಐರ್ಲೆಂಡಿನ ಕೆಲವು ಮಹಿಳೆಯರು ಮೈಸೂರಿಗೆ ಬಂದು ಇವರಿಂದ ಭರತನಾಟ್ಯ ಶಿಕ್ಷಣ ಪಡೆದರೆನ್ನಲಾಗಿದೆ. 1945ನೆಯ ಇಸವಿಯಲ್ಲಿ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಒಂದು ಮಹೋತ್ಸವದಲ್ಲಿ ಇವರ ಅಭಿನಯವನ್ನು ವೀಕ್ಷಿಸಿ ಮೆಚ್ಚಿದ ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಇವರಿಗೆ ನಾಟ್ಯಸರಸ್ವತಿ ಎಂಬ ಬಿರುದನ್ನಿತ್ತು ಗೌರವಿಸಿದರು.
 
 	ಜಟ್ಟಿತಾಯಮ್ಮ ರೂಢಿಸಿದ ಶಾಸ್ತ್ರೀಯ ಭರತನಾಟ್ಯ ಸಂಪ್ರದಾಯ ಹಳೆಯ ಮೈಸೂರು ಪ್ರದೇಶದಲ್ಲಿ ಇಂದಿಗೂ ಸ್ಥಿರವಾಗಿ ಉಳಿದಿದೆ.										(ಕೆ.ವಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ